ಪಾಯಣ್ಣ
1570. ಒಬ್ಬ ಪ್ರಸಿದ್ಧ ಲಿಪಿಕಾರ. ಹಲವಾರು ಕನ್ನಡ ಉದ್ಗ್ರಂಥಗಳನ್ನು ಪ್ರತಿಲಿಪಿಕರಿಸಿದ್ದಾನೆ. ಇಂಥ ಅನೇಕರ ಹೆಸರಾಗಲಿ ಕಾಲವಾಗಲಿ ತಿಳಿದು ಬರುವುದಿಲ್ಲ. ಕೆಲವರು ಮಾತ್ರ ಪ್ರತಿಮಾಡಿದ ಕಾಲವನ್ನೂ ಹೆಸರನ್ನೂ ಹೇಳಿ ಉಪಕರಿಸಿದ್ದಾರೆ. ಈತ ತಾನು ಬರೆದ ಎಲ್ಲ ಪ್ರತಿಗಳ ಕೊನೆಯಲ್ಲಿ ಕಾಲಾದಿವಿವರಗಳನ್ನು ಕೊಡುತ್ತಾನೆ. ಇಂಥ ಮಾಹಿತಿಯಿಂದ ಕವಿಕಾಲ ನಿರ್ಣಯಕ್ಕೆ ಸಹಾಯವಾಗುತ್ತದೆ.

ಈತ ಬೆಳಗಾವಿ ಜಿಲ್ಲೆಯ ಸೇಡಬಾಳದ ಇಂದ್ರನಾಗಣನ ಮಗನೆಂದೂ ಇದ್ದಪ್ಪನ ಸೋದರಳಿಯನೆಂದೂ ಸೇನಗಣದ ಶ್ರೀಲಕ್ಷ್ಮಿಸೇನಾಚಾರ್ಯರ ಪ್ರಿಯಾಗ್ರಶಿಷ್ಯನೆಂದೂ ಈತ ಪ್ರತಿಮಾಡಿದ ಕೃತಿಗಳಿಂದ ತಿಳಿದುಬರುತ್ತದೆ. ಈತ ಎರಡನೆಯ ನಾಗವರ್ಮನ ವರ್ಧಮಾನ ಪುರಾಣವನ್ನು 1567ರಲ್ಲೂ ಆಚಣ್ಣನ ವರ್ಧಮಾನ ಪುರಾಣವನ್ನು 1569ರಲ್ಲೂ ಅಗ್ಗಳನ ಚಂದ್ರಪ್ರಭ ಪುರಾಣವನ್ನು 1572ರಲ್ಲೂ ಪ್ರತಿಮಾಡಿರುವುದಾಗಿ ತಿಳಿಸಿರುತ್ತಾನೆ.
ಈತನ ಅಕ್ಷರಗಳು ದುಂಡಾಗಿಯೂ ಒಂದೇ ಸಮನಾಗಿಯೂ ಇದ್ದು ಸುಲಭವಾಗಿ ಓದುವಂತಿದೆ. ತಪ್ಪುಗಳು ವಿರಳವಾಗಿದ್ದು ಅವುಗಳನ್ನು ಅಲ್ಲಲ್ಲಿಯೇ ತಿದ್ದಲಾಗಿದೆ.
(ಎಸ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ